ಅಪೌರುಷೇಯ

	ಪ್ರಾಚೀನ ಪವಿತ್ರಗ್ರಂಥಗಳ ಕರ್ತೃತ್ವ ವಿಚಾರದಲ್ಲಿನ ಒಂದು ವಾದ. ಇತಿಹಾಸದ ಯುಗಕ್ಕಿಂತಲೂ ಪ್ರಾಚೀನವೆನಿಸಿದ ಧಾರ್ಮಿಕ ಗ್ರಂಥಗಳ ಉಗಮವನ್ನು ನಿರ್ಣಯಿಸುವುದು ಸುಲಭದ ಮಾತಲ್ಲ. ಅದರಲ್ಲೂ ಆ ಧರ್ಮ ಗ್ರಂಥಗಳಲ್ಲಿ ಕಂಡುಬರುವ ತತ್ತ್ವಗಳು ಬಹು ಗಂಭೀರವೂ ಮೂಲಭೂತವೂ ಎನಿಸಿ, ನಿತ್ಯತತ್ತ್ವಗಳ ಸ್ವರೂಪವನ್ನು ಪಡೆದಿರುವಾಗ ಅವುಗಳ ಕರ್ತೃತ್ವವನ್ನು ನಿರ್ಣಯಿಸಲು ರಹಸ್ಯತಮ ವಿವರಣೆಗಳು ಹುಟ್ಟಿಕೊಂಡಿವೆ. ಅಂಥ ಧಾರ್ಮಿಕ ಗ್ರಂಥಗಳನ್ನು ಶ್ರುತಿ ಅಂದರೆ ಕೇಳಿದ್ದು ಅಥವಾ ಪ್ರಕಾಶಗೊಂಡದ್ದು ಎಂದೂ ಸ್ಮøತಿ ಎಂದರೆ ನೆನಪುಮಾಡಿಕೊಂಡದ್ದು ಎಂದೂ ಆಗಮ ಎಂದರೆ ನಡೆದು ಬಂದದ್ದು ಎಂದೂ ಕರೆಯುವುದುಂಟು. ಅಂಥ ತತ್ತ್ವಗಳು ಮಾನವನ ಬುದ್ಧಿಪೂರ್ವಕವಾದ ಪ್ರಯತ್ನದಿಂದ ಮೂಡಿಬಂದವುಗಳಲ್ಲವಾದ್ದರಿಂದ ಅವುಗಳನ್ನು ಅಪೌರುಷೇಯವೆಂದೂ ತಿಳಿಯಲಾಗಿದೆ. ಅಪೌರುಷೇಯ ತತ್ತ್ವಗಳು ಅವಶ್ಯಕವಾಗಿ ನಿರ್ದೋಷವಿರಬೇಕು. ಏಕೆಂದರೆ ದೋಷ ಮಾನವ ಸಹಜವಾದದ್ದೇ ಹೊರತು ದೈವಕ್ಕಂಟಿದ್ದಲ್ಲ. ಅಪೌರುಷೇಯವೆಂದು ಪರಿಗಣಿತವಾದ ವೇದಾದಿ ಧರ್ಮಗ್ರಂಥಗಳು ಅನಾದಿ ಎಂದೂ ಪರಿಗಣಿತವಾಗಿವೆ. ಋಷಿವರ್ಯರು ಕೇವಲ ದ್ರಷ್ಟಾರರೇ ಹೊರತು ಈ ತತ್ತ್ವಗಳ ಕರ್ತೃಗಳೇನಲ್ಲ. ಅಂದಮೇಲೆ ಅವರಿಗಿಂತ ಮೊದಲೂ ಅನಾದಿಕಾಲದಿಂದಲೂ ಇದ್ದಂಥ ಈ ಧಾರ್ಮಿಕತತ್ತ್ವಗಳನ್ನು ಪುರಾತನಕಾಳದ ಋಷಿಗಳು ಮೊಟ್ಟಮೊದಲಿಗೆ ಕಂಡರು, ಅಷ್ಟೆ. ಇದು ಅಪೌರುಷೇಯವಾದಿಗಳ ಮತ.

	ವೇದಗಳು ಅಪೌರುಷೇಯವೆಂದು ನಂಬಿದ ಭಾರತೀಯ ದಾರ್ಶನಿಕರಲ್ಲಿ ಎರಡು ರೀತಿಯ ವಿವರಣೆಗಳು ಬಹುಪ್ರಮುಖವಾಗಿ ಕಾಣುತ್ತವೆ. ನೈಯಾಯಿಕರು ವೇದ ಅಪೌರುಷೇಯವೆಂದು ಒಪ್ಪಿದರೂ ಮಾನವನಲ್ಲದಿದ್ದರೆ ಮಹಾಪುರುಷನಾದ ದೇವರು ಅದರ ಕರ್ತೃವಾಗಿರಬೇಕೆನ್ನುತ್ತಾರೆ. ಅಪೌರುಷೇಯವಾದವನ್ನು ಪೂರ್ಣವಾಗಿ ನಂಬಿದ ಪೂರ್ವಮೀಮಾಂಸಕರು ವೇದ ಅನಾದಿಯಾದ್ದರಿಂದ ದೇವರ ನೆರವಿಲ್ಲದೆ ಅದರ ಅಸ್ತಿತ್ವವನ್ನು ವಿವರಿಸುತ್ತಾರೆ. ಅವರ ಪ್ರಕಾರ ವೇದೋಕ್ತಧರ್ಮ ಮತ್ತು ತತ್ತ್ವಗಳು ಮಾತ್ರವೇ ಅಪೌರುಷೇಯವಲ್ಲ, ವೇದದಲ್ಲಿ ಕಂಡುಬರುವ ಪದಪಂಕ್ತಿಯೂ ಅಪೌರುಷೇಯ ಮತ್ತು ಅನಾದಿ.

	ಈ ಅಂಶವನ್ನು ಐತಿಹಾಸಿಕದೃಷ್ಟಿಯಿಂದ ನೋಡಿದ ಪಾಶ್ಚಾತ್ಯ ದಾರ್ಶನಿಕರಾದ ಮ್ಯಾಕ್ಸ್ ಮುಲ್ಲರ್ ಮತ್ತು ವಿಂಟರ್ ನಿಟ್ಸ್ ಮುಂತಾದವರು ವೇದಗಳ ಅಪೌರುಷೇಯವಾದವನ್ನು ಅಷ್ಟಾಗಿ ಮನ್ನಿಸದೆ ಅವುಗಳಿಗೆ ಕಾಲ ಮತ್ತು ಕರ್ತೃಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ. ವೇದಗಳ ಕಾಲನಿರ್ಣಯದಲ್ಲಿ ಪಂಡಿತರುಗಳಲ್ಲಿ ಭಿನ್ನಾಭಿಪ್ರಾಯವಿರುವುದಾದರೂ ಅವುಗಳ ಕರ್ತೃಗಳಾರಿರಬಹುದೆಂದುಬು ಇನ್ನೂ ಬಿಡಿಸಲಾರದ ಒಗಟಾಗಿಯೇ ಉಳಿದಿದೆ. ಅಂದಮಾತ್ರಕ್ಕೆ ಈ ದಾರ್ಶನಿಕರು ವೇದಗಳು ಅಪೌರುಷೇಯವೆಮಬುದನ್ನು ಮನ್ನಿಸುತ್ತಾರೆಂದಲ್ಲ. ಆದರೆ ಅದರ ಕರ್ತೃಗಳಾರೆಂಬುದನ್ನು ಸಾಧಾರಯುತವಾಗಿ ನಿರ್ಣಯಿಸಲಾರದವರಾಗಿದ್ದಾರೆ.

	ಧರ್ರ್ಮಗ್ರಂಥಗಳು ಅಪೌರುಷೇಯವಾಗಿರಬಲ್ಲವೆಂಬುದು ಹಿಂದೂಧರ್ಮದಲ್ಲಿ ಮಾತ್ರ ಕಾಣಬರುವ ಗುಣವಲ್ಲ. ಇಸ್ಲಾಂ ಧರ್ಮಗ್ರಂಥ ಪ್ರವಾದಿ ಮಹಮ್ಮದನಿಂದಲೂ ಕ್ರೈಸ್ತಧರ್ಮದ ಗ್ರಂಥ ದೇವಪುತ್ರನಾದ ಯೇಸುವಿನಿಂದಲೂ ಮೂಡಿ ಬಂದಿದೆ. ದೈವಾಂಶಸಂಭೂತರಾದ ಈ ಮತಾಚಾರ್ಯರ ದಿವ್ಯದೃಷ್ಟಿಗೆ ಗೋಚರವಾದ ಈ ಧಾರ್ಮಿಕತತ್ತ್ವಗಳು ಅಪೌರುಷೇಯವೂ ನಿರ್ದೋಷವೂ ಪವಿತ್ರವೂ ಆಗಿವೆ ಎಂದು ಆ ಮತಾನುಯಾಯಿಗಳು ಪರಿಗಣಿಸುತ್ತಾರೆ.
	
(ನೋಡಿ- ವೇದಗಳು)								
(ಎ.ಎಲ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ